ಕ್ಯಾಲ 

ಏರೇಸೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ ಸಸ್ಯಜಾತಿ. ರಿಚರ್ಡಿಯ, ಏಲಮ್‍ಲಿಲ್ಲಿ ಎಂಬವು ಇದರ ಪರ್ಯಾಯ ನಾಮಗಳು. ತನ್ನ ಆಕರ್ಷಕವಾದ ಎಲೆ ಮತ್ತು ಹೂಗೊಂಚಲ ಕವಚಗಳಿಂದಾಗಿ (ಸ್ಪೇತ್) ಉದ್ಯಾನ ಪ್ರಾಮುಖ್ಯ ಪಡೆದಿದೆ. ಇದನ್ನು ಅಂಚುಸಸ್ಯ ಇಲ್ಲವೆ ಕುಂಡಸಸ್ಯವಾಗಿ ಬೆಳೆಸುತ್ತಾರೆ.

	ಇದೊಂದು ಬಹುವಾರ್ಷಿಕ ಸಸ್ಯ. ಭೂಮಿಯೊಳಗೆ ಹರಡಿಕೊಂಡು ಬೆಳೆಯುವ ತನ್ನ ಪ್ರಕಂದದಿಂದಾಗಿ ವರ್ಷವರ್ಷವೂ ಬೆಳೆಯುತ್ತ ಹೋಗುತ್ತದೆ. ಪ್ರಕಂದದಿಂದ ಮೊದಲ ವರ್ಷ ಹಲವಾರು ಎಲೆಗಳು ಹುಟ್ಟುವುವಾದರೂ ಅನಂತರದ ವರ್ಷಗಳಲ್ಲಿ ವರ್ಷಕ್ಕೆ ಎರಡೇ ಎಲೆಗಳು ಹುಟ್ಟುತ್ತವೆ. ಎಲೆಗಳಿಗೆ ಕೊಳವೆಯಂಥ ತೊಟ್ಟೂ ಹೃದಯದಾಕಾರದ ಅಲಗೂ ಇವೆ. ಹೂಗೊಂಚಲು ಸ್ಪೇಡಿಕ್ಸ್ ಬಗೆಯದು. ಇದಕ್ಕೆ ಚೆಲುವಾದ ಬಿಳಿಯ ಬಣ್ಣದ ಕವಚವಿದೆ. 

	ಕ್ಯಾ.ಎಲಿಯೋಟಿಯಾನ ಮತ್ತು ಕ್ಯಾ.ಆಲ್ಬೊಮ್ಯಾಕ್ಯುಲೇಟ ಎಂಬುವು ಹೆಚ್ಚು ಜನಪ್ರಿಯವಾದ ಪ್ರಭೇದಗಳು.

	ಕ್ಯಾಲವನ್ನು ಪ್ರಕಂದದ ತುಂಡುಗಳಿಂದ ವೃದ್ಧಿ ಮಾಡಬಹುದು. ಪ್ರಕಂದಗಳನ್ನು ನಾಟಿಮಾಡಲು ಮೈದಾನ ಪ್ರದೇಶಗಳಲ್ಲಿ ಅಕ್ಟೋಬರ್-ನವೆಂಬರ್ ತಿಂUಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಮಾರ್ಚ್-ಏಪ್ರಿಲ್ ಯೋಗ್ಯವಾದ ಕಾಲ. ಇದಕ್ಕೆ ಹೆಚ್ಚು ತೇವ ಬೇಕಾದರೂ ನೆಲ ಜೌಗಾಗಿರಬಾರದು. ಫಲವತ್ತಾದ ಮಣ್ಣು ಅಗತ್ಯ. ಚಳಿಗಾಲದಲ್ಲಿ ಭೂಮಿಯ ಮೇಲಿನ ಸಸ್ಯಭಾಗ ಸತ್ತು ಪ್ರಕಂದ ಸುಪ್ತಾವಸ್ಥೆಗೆ ಬರುತ್ತದೆ. ಮಾರ್ಚ್ ತಿಂಗಳ ವೇಳೆಗೆ ಹೊಸ ಎಲೆಗಳು ಹುಟ್ಟಿ ಅನಂತರ ಹೂ ಅರಳಲು ಪ್ರಾರಂಭಿಸುತ್ತವೆ.  (ಬಿ.ಎ.ಸಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ